Showing posts with label kannada post. Show all posts
Showing posts with label kannada post. Show all posts

25 November, 2011

ಹಾಗೆ ಸುಮ್ಮನೆ

ನನ್ನ ಬ್ಲಾಗಿನಲ್ಲಿ ಬರೆದಿರುವ ಎಲ್ಲಾ ಕನ್ನಡ ಲೇಖನಗಳೂ ಯಾವುದಾದರೊಂದು ತೀವ್ರತೆಯ ಸಂಗತಿಯ  ಬಗ್ಗೆ ಇದ್ದಿವೆ. ಈ ಲೇಖನದಲ್ಲಿ ಅಂತಹ ಯಾವುದೂ ತೀವ್ರ ವಿಷಯವನ್ನು ಮುಟ್ಟದೆ , ಹಾಗೆ ಸುಮ್ಮನೆ ಬರೆಯುವುದಾಗಿ ನಿರ್ಣಯಿಸಿದ್ದೇನೆ, ಹೇಗೆ ಮುಂದುವರಿಯುವುದು ಎಂದು ನೋಡೋಣ.

ನನ್ನ ಮಾತೃಭಾಷೆ ಯಾವುದೆಂದು ಕೇಳಿದಾಗ, ನನಗೆ ಎನು ಉತ್ತರ ಹೇಳುವುದೆಂದು ಇತ್ತೀಚಿಗೆ ಗೊಂದಲವಾಗುತ್ತಿದೆ. ಮೊದಲು ಮಾತೃ ಭಾಷೆ ಎಂದರೆ ಏನು ಎಂಬ ಸ್ಪಷ್ಟನೆಯ ಅವಶ್ಯಕತೆ ಇದೆ!

ನನ್ನ ತಾಯಿ ಮಾತನಾಡುವ ಭಾಷೆ ಮಾತೃಭಾಷೆಯೆ?
ನಾನು ಹುಟ್ಟಿದ ರಾಜ್ಯದ ಆಡುಭಾಷೆ ನನ್ನ ಮಾತೃಭಾಷೆಯೆ?
ಅಥವಾ, ನನ್ನ ಮೆದುಳು ಆಲೋಚನೆಗಳನ್ನು ಮಾಡುವ ಭಾಷೆ ನನ್ನ ಮಾತೃಭಾಷೆಯೆ?

ಈ ಗೊಂದಲದಿಂದ ಹೊರಬಾರದೆ, ನನ್ನ ಮಾತೃಭಾಷೆಯಾವುದೆಂದು ಪರಿಗಣಿಸುವುದು ಅಸಾಧ್ಯವೇ ಹೌದು. ಮೇಲಿನ ಮೂರೂ ವಿವರಣೆಗಳನ್ನು ಕುರಿತು ನಾನು ಒಂದು ಭಿನ್ನವಾದ ಉತ್ತರವನ್ನು ನೀಡಬಲ್ಲೆನು.

ನನ್ನ ತಾಯಿ ಮಾತನಾಡುವ ಭಾಷೆ ತಮಿಳು. ಈ ಕಾರಣ ತಮಿಳು ನನ್ನ ಮಾತೃಭಾಷೆ ಎಂದು ಹೇಳುವುದು ಸುಲಭವಲ್ಲ. ನನಗೆ ತಮಿಳು ಓದಲು, ಬರೆಯಲು ಬರುವುದಿಲ್ಲ - ಈಗ ಕಲಿಕೆಯಲ್ಲಿ ತೊಡಗಿದ್ದೆನೆ!

ನಾನು ಹುಟ್ಟಿದ ರಾಜ್ಯದ ಆಡುಭಾಷೆ ಕನ್ನಡ. ೧೨ ವರ್ಷಗಳ ಕಾಲ ವ್ಯಾಸಂಗ ನಡೆಸಿ, ಕನ್ನಡ ಸಾಹಿತ್ಯ, ಆ ಮೂಲಕ ಕರ್ನಾಟಕದ ಇತಿಹಾಸದ ತುಣುಕುಗಳನ್ನು ಮೆಲುಕು ಹಾಕಿದ್ದೇನೆ. ಈ ಕಾರಣ ಕನ್ನಡ ನನ್ನ ಮಾತೃಭಾಷೆ ಎಂದು ಹೇಳುವುದು ಅತಿ ತಕ್ಕದಾದ ಉತ್ತರವಾದರೆ,

ನನ್ನ ಮೆದುಳು ನಡೆಸುವ ಎಲ್ಲಾ ಆಲೋಚನೆಗಳು, ವಿಚಾರ-ವಿಮರ್ಷೆಗಳು, ಕಲ್ಪನೆ ಮತ್ತು ಅಭಿಪ್ರಾಯಗಳೆಲ್ಲವೂ ಆಂಗ್ಲದಲ್ಲಿಯೆ ನಡೆಯುತ್ತಿರುವುದು ಚಿಂತಾಜನಕವಾದ ಸಂಗತಿ! ಈ ಕಾರಣ ಆಂಗ್ಲ ನನ್ನ ಮಾತೃಭಾಷೆಯಾಗಲು ಸಾಧ್ಯವೆ?

ಆಲೋಚಿಸಬೇಕಾದ ವಿಷಯ ಹೌದು!

ಹಾಗೆ ಸುಮ್ಮನೆ ಎಂದು ಹೊರಟು, ಒಂದು ಕಷ್ಟಕರ ಸುಳಿಯಲ್ಲಿ ಸಿಲುಕಿಕೊಂದಿರುವಂತಿದೆ. ಆದರೂ, ಎಲ್ಲವೂ ನಡೆಯಲಿ, ಹಾಗೆ ಸುಮ್ಮನೆ!

17 October, 2011

ಯರೂ ಕಾಣದ ಆಪಲ್ ಕಂಡ ಜಾಬ್ಸ್


ಗಣಕಗಳನ್ನು  ಜನಸಾಮನ್ಯರು ಬಳಸಲು ಅನುಕೂಲವಾಗುವಂತೆ ತಯಾರಿಸುವುದಾಗಿ ಹೊರಟ ಆಪಲ್ ಕಂಪನಿಯು, ಗಣಕ ಮತ್ತು ತನ್ನ ಇನಿತ್ತರ ಉತ್ಪನ್ನಗಳ ಸ್ವರೂಪಕ್ಕೆ  ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟರು. ಈ ಕಾರಣ ಆಪಲ್  ಸೃಷ್ಟಿಸಿದ ತಂತ್ರಜ್ಞಾನವು  ಗ್ರಾಹಕರಿಗೆ ಸ್ವತಂತ್ರತೆ ಇಲ್ಲದಿರುವ , ಅತಿ ದುಬಾರಿಯಾದ ಉತ್ಪಾದನೆಗಳನ್ನು ತಯಾರಿಸಿ, ಗ್ರಾಹಕರಿಲ್ಲಿ ಒಂದು ಚಟದಂತೆ ಬೆಳೆದ ಆಪಲ್ ಕಂಪನಿಯ ಸಂಸ್ಥಾಪಕರಲ್ಲಿ ಮುಖ್ಯರಾದ  ಸ್ಟೀವ್ ಜಾಬ್ಸ್  ,ಇತ್ತೀಚೆಗೆ ನಿಧನರಾದರು.

ಸ್ಟೀವ್ ಜಾಬ್ಸ್  ನಿಧನರಾದಂತೆ ಎಲ್ಲಾ ಮಾಧ್ಯಮಗಳಲ್ಲಿಯೂ ಅವರ ಕೀರ್ತನೆಯು ನದಿಯಂತೆ ಹರಿಯಲಾರಂಭಿಸಿತು. ಈ ವರದಿಗಳನ್ನೆಲ್ಲ ನಂಬುವುದಾದರೆ ,ಸ್ಟೀವ್ ಜಾಬ್ಸ್  ೨೧ನೇ ಶತಮಾನದ ನ್ಯೂಟನ್,  ಐನ್ ಸ್ಟೈನ್, ಎಡಿಸನ್ ಎಂದು ಹೋಲಿಸಿ ಹೊಗಳುತ್ತಿದ್ದಾರೆ. ಅದೇ ಸಮಯ ಹಲವಾರು ಬುಧ್ದಿ ಜೀವಿಗಳು ಸ್ಟೀವ್ ಜಾಬ್ಸ್ ರವರ ಕೆಲಸ ವ್ಯೆಖರಿಗಳನ್ನು ಮತ್ತು ಅವರ ಸೃಜನಶೀಲತೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ .

ಸ್ಟೀವ್ ಜಾಬ್ಸ್ ರವರನ್ನು  ಹೊಗಳುವುದೇ, ಅಥವಾ ಟೀಕಿಸುವುದೇ?

ಅವರ ಜೇವನ ಮತ್ತು ಕೆಲಸಗಳನ್ನು ಪರಿಗಣಿಸಿದರೆ , ಈ ಪ್ರಶ್ನೆಗೆ ಉತ್ತರ ಸುಲಭವಾಗಿ ಅರಿವಾಗುವುದು. ಒಬ್ಬ ಗಣಕ ತಂತ್ರಜ್ಞಾನಿಯಿಂದ ಆಪಲ್ ಮತ್ತು ಪಿಕ್ಸರ್ ನಂತಹ ಬೆಟ್ಟದಾಕಾರದ ಕಂಪನಿಗಳನ್ನು  ಬೆಳೆಸಿರುವುದು ಒಂದು ದೃಷ್ಟಿಕೋಣದಲ್ಲಿ  ದೊಡ್ಡ ಸಾಧನೆಯಂದು ಪರಿಗಣಿಸಿದರೆ. ಕ್ಯಾನ್ಸರ್ ನಂತಹ ರೋಗದಲ್ಲಿ ನರಳುತ್ತಿದ್ದಾಗಲೂ ಜೀವನದಲ್ಲಿ ಹೋರಾಡಿ ಜನಸಾಮಾನ್ಯರಗಿ ಒಂದು ಸ್ಪೂರ್ತಿಯನ್ನು ಒದಗಿಸಿದ್ದಾರೆ.

ಆದರೆ , ಅವರು ಈ ಸಾಧನೆಗಳನ್ನು ಮಾಡಿದ್ದು ಹೇಗೆ, ಎಂಬ ವಿಷಯವನ್ನು ಯಾವ ಮಾದ್ಯಮಗಳಲ್ಲಿಯೂ ಚರ್ಚಿಗೊಳಗಾಗುತ್ತಿಲ್ಲ.

ಕ್ರಿಯಾಶೀಲತೆ ಮತ್ತು ಸೃಜನೆಶೀಲತೆಯು ಬೇರೆಯವರಿಂದ ಅನುಕರಣೆ ಮಾಡುವುದೇ ಅವರ ಕಂಪನಿಯ ಬೆಳವಣಿಗೆಗೆ ಕಾರಣವೆಂದು ಒಪ್ಪಿಕೊಂಡಿರುವ ಸ್ಟೀವ್ ಜಾಬ್ಸ್ ರವರು ,ಅವರ ಕಂಪನಿಯಲ್ಲಿ ಉತ್ಪಾದನೆಗೊಂಡ ಒಂದೊಂದು ಉತ್ಪನ್ನವೂ, ಅದರಲ್ಲಿರುವ ತಂತ್ರಾಂಶವು ಗ್ರಾಹಕರಿಗೆ ಕಡಿವಾಣ ಹಾಕಿದಂತೆ ಇವೆ. ಅವರು ಮಾಡಿದ ಅನುಕರಣೆ ಹಾಗು ಅದರಿಂದ ಪಡೆದ ಲಾಭವನ್ನು, ತಮ್ಮ ಗ್ರಾಹಕರು ಪಡೆದು, ಬೆಳೆಯದಂತೆ ಒಂದು ಕಾರಾಗೃಹವನ್ನೆ ನಿರ್ಮಿಸಿದ್ದಾರೆ.

ಸ್ವತಂತ್ರ ತಂತ್ರಾಂಷ ಆಂದೋಲನದ , ರಿಚರ್ಡ್ ಸ್ಟಾಲಮನ್ ರವರು ಸ್ಟೀವ್ ಜಾಬ್ಸ್ ರವರನ್ನು  ಕುರಿತು "ಗಣಕವನ್ನು ಕಾರಾಗೃಹ ಮಾಡಿದ ಸ್ಟೀವ್ ಜಾಬ್ಸ್ ರವರು ನಿಧನರಾದ ಮೇಲಾದರೂ ಅವರ ಕಂಪನಿ ತಾಂತ್ರಿಕ ಸ್ವತಂತ್ರತೆಯನ್ನು  ತನ್ನ ಗ್ರಾಹಕರಿಗೆ ಒದಗಿಸಲಿ ಎಂದು ಅಶಿಸೋಣ " ಎಂದು ಹೇಳಿದ್ದಾರೆ.

ಗ್ರಾಹಕರ ಸ್ವಾತಂತ್ರತೆಯ ಬಗ್ಗೆ ಇಂಚಿತ್ತೂ ಆಲೋಚಿಸದೆ , ಲಾಭವೇ ತನ್ನ  ಪ್ರಮುಖ ಗುರಿ ಎಂದು ಗಗನಾಂತರ ಬೆಳೆಯುತ್ತಿರುವ ಆಪಲ್ ಕಂಪನಿಯಂತಹ  ದ್ಯೆತ್ಯವನ್ನು  ಸೃಷ್ಟಿಸಿರುವ ಸ್ಟೀವ್ ಜಾಬ್ಸ್ ರವರನ್ನು , ಬಂಡವಾಳಶಾಹಿ ಮಾಧ್ಯಮವು ತನಗೆ  ಬೇಕಾದಂತೆಯೇ ಒಬ್ಬ ನಾಯಕನನ್ನು ಸ್ಟೀವ್ ಜಾಬ್ಸ್ ರವರಲ್ಲಿ ಕಂಡು, ಪ್ರಚಾರ ಮಾಡುತ್ತಿದೆ.

ಸ್ಟೀವ್ ಜಾಬ್ಸ್ ರವರು ವಯಕ್ತಿಕವಾಗಿ ಹೋರಾಡಿ ತಮ್ಮ ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು ಎಂದು ಹೇಳಿವುದಾದರೂ, ಆ ಸಾಧನೆಗಳ ಮೂಲ ಆಧಾರ ಎನು? ಎಂಬುದು ಆಲೋಚಿಸ ಬೇಕಾದ ವಿಷಯ.ತಂತ್ರಜ್ಞಾನದಲ್ಲಿ  ಅಸ್ವತಂತ್ರತೆಯನ್ನು  ಸೇರಿಸಿ ಕಲುಷಿತಗೊಳಿಸಿದ ತಂತ್ರಜ್ಞಾನಿ ಸ್ಟೀವ್ ಜಾಬ್ಸ್, ಎಂದು  ಸಮಾಜದ ಮೇಲೆ ಕಾಳಜಿಯಿರುವ ಇರುವವರೆಲ್ಲರೂ ಒಪ್ಪುವರು.

ಹಿನ್ನುಡಿ: ಜನಶಕ್ತಿ ವಾರಪತ್ರಿಕೆಗೆ ನಾನು ಬರೆದ ಲೆಖನ 

11 October, 2011

ಸೂರ್ಪಣಂಗು : ಒಂದು ಪ್ರಭಾವಶಾಲಿ ನಾಟಕ


ಹಲವಾರು ದಿನಗಳ ನಂತರ, ಕನ್ನಡದಲ್ಲಿ ಒಂದು ಲೇಖನವನ್ನು ಬರೆಯುತ್ತಿರುವೆನು. ಈ ಲೇಖನವು ಒಂದು ತಮಿಳು ನಾಟಕದ ಕುರಿತು ಎಂಬುದು ವಿಶೇಷ. ಸೂರ್ಪಣಂಗು ಎಂಬ ತಮಿಳು ನಾಟಕ ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಯಿತು.

ನನಗೆ ಹಲವಾರು ಹೊಸದಾದ ವಿಚಾರಗಳು ಮತ್ತು ಮಹತ್ವದ ದ್ರಿಷ್ಟಿಕೋನಗಳು ಈ ನಾಟಕ ಹಾಗು ಅಲ್ಲಿ ಸೇರಿದ್ದ ಜನರಿಂದ ಅರಿವಾಯಿತು.

ಸಮಾನತೆ ಎಂಬುದು, ಬರಿಯ ಪಠ್ಯ ಸೀಮಿತ ವಿಚಾರವಾಗಿದ್ದು, ಇಂದಿಗೂ ಹಲವಾರು ವರ್ಗದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಂತಹ ಒಂದು ವರ್ಗದ ಹೋರಾಟದ ಬಗ್ಗೆ ಈ ನಾಟಕದ ಆಯೋಜಕರ ಮೂಲಕ ತಿಳಿದು ಕೊಂಡೆನು.

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರುಗಳ ಸಾಮಾಜಿಕ ತೊಂದರೆ, ಕಷ್ಟಗಳು ಮತ್ತು ಹೋರಾಟಗಳ ಬಗ್ಗೆ ಒಂದು ಇಣುಕು ದೊರಕಿತು. ಅಕ್ಕೈ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರಲ್ಲಿ ಒಬ್ಬರಾಗಿದ್ದು, ಅವರ  ಅಂಗೀಕಾರ, ಹಕ್ಕು, ಮತ್ತು ಸಮಾನತೆಗಳಿಗಾಗಿ ತಮ್ಮ ಸಂಗಾತಿಯರೊಂದಿಗೆ ನಡೆಸುತ್ತಿರುವ ಜನಾಗೃತಿ ಚಟುವಟಿಕೆಗಳ ಬಗ್ಗೆಯು ಅರಿವಾಯಿತು. ಇಂತಹ ಅಸಮಾನತೆಗಳ ಗೂಡಾಗಿ ಬೆಳೆದಿರುವ ನಮ್ಮ ಸಮಾಜದಲ್ಲಿ ನಮ್ಮ ಪಾತ್ರವೇನು ಎಂದು ಆಲೋಚಿಸುವ ಅವಕಾಶವಾಗಿ ಈ ಅನುಭವ ಒದಗಿತು.

ಸೂರ್ಪಣಂಗು ನಾಟಕವು ಕನ್ನಡ ರಂಭೂಮಿಯೊಳಗೆ ತಮಿಳು ರಂಗಕ್ರಿಯೆಯ ಅನುಸಂಧಾನವೆಂದು ಪರಿಗಣಿಸಿ, ಪ್ರಸ್ತುತಿಸಿದರು . ನಾಟಕ ಗ್ರಾಮೇಣ ಮತ್ತು ಶುದ್ಢ ತಮಿಳಿನಲ್ಲಿದುದರಿಂದ, ನನಗೆ ವಚನ, ಸಂಭಾಷಣೆಗಳು ಅರ್ಥವಾಗಲಿಲ್ಲ. ಮಾತೃ ಭಾಷೆಯಾದರೂ ಇಂತಹ ಅವಸ್ಥೆಯಲ್ಲಿದೆ ನನ್ನ ತಮಿಳು :-)

ಸಂಭಾಷಣೆ ಅರ್ಥವಾಗದಿದ್ದರೂ ನಟರ ಅಭಿನಯವು ಯಥಾರ್ಥವಾಗಿತ್ತು. ಗ್ರಾಮೇಣ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಹಸಿವು, ಕ್ಷಾಮ, ಬರ ಮತ್ತು ಜೇವನದ ದೈನಂದಿನ ಹೋರಾಟಗಳನ್ನು  ಅತಿ ಪ್ರಭಾವಶಾಲಿಯಾಗಿ ಅಭಿನಯಿಸಿದ್ದರು. ಆ ಪ್ರಭಾವವು ಪ್ರೇಕ್ಷಕರಾದ ನಮ್ಮ ಮನಸ್ಸನ್ನು ತೇವ್ರತೆಯಿಂದ ಬಿಗಿ ಹಾಕಿತ್ತು. ಹಲವಾರು ದೃಶ್ಯಗಳು ನೋಡುಗರನ್ನು ತಳಮಳಗೊಳಿಸಿತು. ಹೆಂಗಸರಿನ ಮೇಲಿನ ದೌರ್ಜನ್ಯ, ಕಾರ್ಮಿಕರ ಮೇಲೆ ಅತ್ಯಾಚಾರ ಇಂತಹ ಸಂಗತಿಗಳು ನಿಜವಾಗಿದ್ದರು ಅದನ್ನು ಒಂದು ಪ್ರಭಾವಶಾಲಿ ನಾಟಕದ ಮೂಲಕ ಕಾಣುವುದು ಬಹಳ ಕಷ್ಟಕರವೆನಿಸಿತು ನನಗೆ.
ಸುಮಾರು ಎರಡು ಗಂಟೆಗಳ ಕಾಲ ಗಾಢವಾದ ಪರಿಶ್ರಮ  ಮತ್ತು ಉತ್ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನಟರು ಮತ್ತು ಅವರ ಪ್ರಯತ್ನವು ಮನದಾಳದಲ್ಲಿ ನೆಲೆಸಿದೆ. ನಾಟಕಕಾರರು ಪಡುವ ಪರಿಶ್ರಮವನ್ನು ನಾವು ಉತ್ತೇಜಿಸಿ ಬೆಂಬಲಿಸಬೇಕು. ಹಾಗು, ಇಂತಹ ನಾಟಕಗಳಲ್ಲಿ ಹೇಳಲ್ಪಡುವ ಸಂಗತಿಯನ್ನು ನಮ್ಮ ಜೇವನದಲ್ಲಿ ನಾವು ಸಂಧರ್ಭ ಬಂದಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಸುಧಾರಣೆಯನ್ನು ತರಲು ನಮ್ಮಿಂದಾಗುವ ಪ್ರಯತ್ನವನ್ನು ಪಡಬೇಕು.

09 February, 2011

ಕೋಪ ಬರಲೇಬೇಕು!

ಇತ್ತೀಚಿಗೆ ಒಂದು ಸರಕಾರೀ ಕಛೇರಿಯಲ್ಲಿ ಕೆಲಸವಿದ್ದಿತು. ಒಂದೆರಡು ಮುಖ್ಯವಾದ ದಾಖಲೆಗಳನ್ನು ಅವರಲ್ಲಿ ಕೊಟ್ಟು , ಕೆಲಸಕ್ಕೆ  ಹೊರಡಬೇಕಾದ ಸನ್ನಿವೇಷ.

ಆ ಕಛೇರಿಯ ಕಾರ್ಯಸಮಯ ಬೆಳಿಗ್ಗೆ  ೯:೦೦ ರಿಂದ ಸಾಯಂಕಾಲ ೫:೦೦ ರವರೆಗೆ ಎಂದು ಒಂದು ಫಲಕದಲ್ಲಿ ಸೂಚಿಸಲಾಗಿತ್ತು. ಈ ಕೆಲಸದ ಸಲುವಾಗಿ ಹಲವಾರು ಬರುವರೆಂದು ಅರಿತ ನಾನು, ಮತ್ತು ನನ್ನಂತಹ ಇನ್ನು ಕೆಲವರು ಸ್ವಲ್ಪ ಬೇಗನೆಯೇ ಅಲ್ಲಿ ಸೇರಿದ್ದವು.

ಸಮಯ ೯: ೦೦ ಇನ್ನೂ ಹಲವಾರು ಜನ ನಮ್ಮ ಸಾಲಿನಲ್ಲಿ ಸೇರಿದರು, ಆದರೆ ಆ ಕಛೇರಿಯ ಕಾರ್ಮಚಾರಿಗಳು ಬರುವಂತೆ ಕಂಡು ಬರಲಿಲ್ಲ. ಇಲ್ಲಿ ಸೇರಿದ್ದ ಎಲ್ಲರೂ ತಮ್ಮ ಕೆಲಸಕ್ಕೆ ಹೋಗಲು ಸಿದ್ಧರಾಗಿರುವಂತೆ ಕಂಡು ಬಂದಿತು. ಸೇರಿದ್ದ ಜನರ ಸಂಖ್ಯೆ ೧೦ ರಿಂದ ೨೦, ೧೫ ನಿಮಿಷಗಳಲ್ಲಿ ಸುಮಾರು ೪೦ ಜನ ಸೇರಿದ್ದರು.

ಸಮಯ ೯:೩೦ ಆದರೂ, ಕರ್ಮಚಾರಿಗಳು ಯಾರೂ ಬರಲಿಲ್ಲ.
ತಡವಾಗಿ ಬರುವುದು, ಬಂದ ನಂತರ ನಿರ್ಲಕ್ಷ್ಯತೆಯಿಂದ ಕೆಲಸವನ್ನು  ಮಾಡುವುದು ನಮ್ಮ ಭಾರತ ದೇಶದ ಸಂಸ್ಕ್ರುತಿಯೆಂದೇ ಹಲವರು ನಂಬಿದ್ದೇವೆ. ಹಾಗೆ ನಂಬಿದ್ದ ಕೆಲವು ಜನರು ಇದರ ಬಗ್ಗೆ ಗೊಣಗಲು ಪ್ರಾರಂಭಿಸಿದರು. 'ಸರಕಾರೀ ಕಛೇರಿಗಳೇ ಹೀಗೆ', 'ಏನೂ ಪ್ರಯೋಜನವಿಲ್ಲ' , 'ಊಟದ ಸಮಯವನ್ನು ಮಾತ್ರ ಸರಿಯಾಗಿ ಪಾಲಿಸುವರು ', ಎಂದು ಇನ್ನೂ ಬಹಳ ರೀತಿಯ ಮಾತಿನ ಕಿಡಿ ಕಾರುತಿದ್ದರು.

ಸಮಯ ೯:೪೫, ಕಛೇರಿಯ ಕಾರ್ಮಿಕರು ಯಾವುದೇ ಆತಂಕವಿಲ್ಲದೆ, ಹಾಯಾಗಿ ಬಂದರು. ಬಂದು, ತಮ್ಮ ವಯಕ್ತಿಕ ಮಾತು ಕಥೆಗಳನ್ನು ಮುಗಿಸಿ ತಮ್ಮ ಕುರ್ಚಿಯಲ್ಲಿ ಬಂದು ಕುಳಿತು ತಮ್ಮ ಕೆಲಸವನ್ನು ನಿಧಾನವಾಗಿ ಪ್ರಾರಂಭಿಸಿದರು. ಅಲ್ಲಿಯವರೆಗೆ  ಗೊಣಗುತ್ತಿದ್ದ ಜನ, ತೆಪ್ಪಗಾಗಿ ತಮ್ಮ ದಾಖಲೆಗನ್ನು ಕೊಟ್ಟು  ಹೋಗ ತೊಡಗಿದರು. ಆತನಕ ಅವರು ಕಿಡಿಕಾರುತಿದುದನ್ನು ಆ ಕಾರ್ಮಿಕರು ನೋಡಲಿಲ್ಲ; ಹಾಗೆ ನೋಡಿದ್ದರೆ, ಸ್ವಲ್ಪವಾದರೂ ಯೋಚಿಸಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕೆಂದು ನಿರ್ಧರಿಸುತ್ತಿದರೋ ಏನೋ . ಆದರೆ ನಮ್ಮ ಜನ ಈಗ ತಮ್ಮ ಬಾಯನ್ನೂ ತೆಗೆಯಲೇ ಇಲ್ಲ .

ಸಮಯ ೧೦:೦೦, ನನ್ನ ಸರದಿ ಬಂದಿತು. ನಾನೂ ನನ್ನ ದಾಖಲೆಗಳನ್ನು ಕೊಟ್ಟು, ಸಹಿ ಮಾಡಿದೆ. ಅದಾದ ನಂತರ ಆ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡೆ. ಸರಿಯಾದ ಸಮಯಕ್ಕೆ ಅವರು ಬಾರದ ಕಾರಣ, ೫೦ ಜನರು ತಮ್ಮ ಕೆಲಸಗಳಿಗೆ ತಡವಾಗಿ ಹೋಗ ಬೇಕಾದ ಪರಿಸ್ಥಿತಿ ಉಂಟಾಗಿದೆ, ಮತ್ತು ಅವರಲ್ಲಿ ಸ್ವಲ್ಪವೂ ಜವಾಬ್ದಾರಿಯಿಲ್ಲವೆಂದು ಹೇಳಿದೆ. ಅಷ್ಟರಲ್ಲಿ, ಆ ಕಾರ್ಮಿಕರು ಬರುವ ಮುನ್ನ ಗೊಣಗುತ್ತಿದ್ದ ಜನರು ನನನ್ನು ಸಮಾಧಾನ ಮಾಡಿಕೊಳ್ಳಲು  ಹೇಳತೊಡಗಿದರು. ಆ ಕಾರ್ಮಿಕರ ಮೇಲೆ ಇದ್ದ ಕೊಪಕ್ಕಿಂತ ಈ ಸತ್ತ-ಪ್ರಜೆಗಳ ಮೇಲೆ ಕೋಪ ಅಧಿಕವಾಯಿತು. ಕಛೇರಿಯ ಕಾರ್ಮಿಕರು ಬರುವ ಮುನ್ನ ಅವರ ಬಗ್ಗೆ ಹರಟೆ ಹೊಡೆದು, ಅವರ ಮುಂದೆ ಏನೂ ಹೇಳದೆ, ಹೇಳುತಿದ್ದ ನನನ್ನು ತಡೆಯುತಿದ್ದ ಆ ಮೂರ್ಖರಂತೆ ವರ್ತಿಸುದ್ದ ಜನರ ಮೇಲೆ ಇನ್ನಷ್ಟು ಕೋಪ ಹೆಚ್ಚಾಯಿತು.
"ಅವರ ಬೆನ್ನ ಹಿಂದೆ ಅವರನ್ನು ನೀವು ಟೀಕಿಸಿದರೆ ಏನು ಪ್ರಾಯೋಜನೆ? ಅವರ ಮುಂದೆ, ಅವರನ್ನು ತರಾಟೆಗೆ ತೆಗೆದರೆ ತಾನೇ ಅವರಲ್ಲಿ ನಮ್ಮ ಬಗ್ಗೆ ಜವಾಬ್ದಾರಿ ಬಂದು, ಕೆಲಸವನ್ನು ಸರಿಯಾಗಿ ಮಾಡುವರು!" ಎಂದು ಅಲ್ಲಿದ ಜನರನ್ನು ಕೇಳಿ, ಅಲ್ಲಿಂದ ಹೊರಡಲು ಆರಂಭಿಸಿದೆ.

ನಾನು ಕೊಪಗೊಂಡುದನ್ನು  ನೋಡಿದ ಒಬ್ಬ ಮಧ್ಯ ವಯಸ್ಕನು ನನಗೆ  " easy  ..easy  " ಎಂದು ಉಪವಾದ ಮಾಡಿದರು.
ನಡೆಯುತ್ತಿದ್ದ ನಾನು, ಅವರ ಬಳಿ ನಿಂತು : "ನೀವು  easy  ..easy ... ಅಂತ ಹೇಳಿಯೇ ನಮ್ಮ ದೇಶವನ್ನು ಈ ಸ್ಥಿತಿಗೆ ತಂದಿದ್ದೆರೆ ...ಕೋಪ ಪಡಬೇಕು ರೀ!", ಎಂದು ಗರ್ಜಿಸಿ ಅಲ್ಲಿಂದ ಹೊರಟೆ !

ಹಿನ್ನುಡಿ :
ನನ್ನ ಅನಿಸಿಕೆಯ     ಪ್ರಕಾರ ನಮ್ಮ ದೇಶದ ಜನತೆ ಗಾಂಧಿಯವರ ಅಹಿಂಸಾ ತತ್ವವನ್ನು ತಪ್ಪಾಗಿ ಅರಿತು ಅನುಸರಿಸುತಿದ್ದಾರೆ .
ಗಾಂಧೀ ನಮಗೆ ಕೋಪವೇ ಬರಬಾರದು, ಎಲ್ಲವನ್ನು  ಸಹಿಸಿಕೊಂಡು ಹೋಗಬೇಕೆಂದು ಹೇಳಿಕೊಡಲಿಲ್ಲ!

ಅನ್ಯಾಯವನ್ನು ಕಂಡಾಗ ಕೋಪ ಪಡಬೇಕು,
ಆಗ ನಮಗೆ ಬರುವ ಕೋಪವನ್ನು  ಅಹಿಂಸಾತ್ಮಕವಾಗಿ ವ್ಯಕ್ತ ಪಡಿಸಬೇಕು!
ಎಂದು ಗಾಂಧೀ ಹೇಳಿ, ಅವರ ಬದುಕಿನ ಮುಖಾಂತರ ತೋರಿಸಿಕೊಟ್ಟಿದ್ದಾರೆ...

25 December, 2010

ಪಂಚರಂಗಿ ಮಾತುಗಳು

ಬಹಳ ಅಂತರದ ನಂತರ, ಒಂದು ಆಹ್ಲಾದಕರ ಕನ್ನಡ ಚಿತ್ರವನ್ನು  ನೋಡುವ ಅವಕಾಶ ದೊರಕಿತು. ಯೋಗರಾಜ ಭಟ್ಟರ 'ಪಂಚರಂಗಿ', ಒಂದು  ಸರಳವಾದ ಮನೋರಂಜಕ ಚಿತ್ರ. ಇದರಲ್ಲಿ ಬಹಳ ಗಂಭೀರವಾದ ವಿಷಯವಾಗಲಿ, ವಸ್ತುವಾಗಲಿ   ಪ್ರಸ್ತಾಪಿಸದೆ, ಸಣ್ಣದೊಂದು ಕಥೆಯನ್ನು ಒಳ್ಳೆಯ ಸಂಗೀತ, ಸಂಭಾಷಣೆಗಳ ಅಭಿರುಚಿಯಿಂದ ಸೇರಿಸಿಸಿ ನಿರೂಪಿಸಲಾಗಿದೆ.

ಇಂದಿನ ಕರಾವಳಿ ಕರ್ನಾಟಕದ ಕಲಾಚಾರದಲ್ಲಿ  ನಡೆಯುವ ಎರಡು ದಿನಗಳ ಘಟನೆಗಳನೂ, ಎರಡು ತಾಸುಗಳಲ್ಲಿ ಅತ್ಯಂತ ಸೌಂದರ್ಯವಾಗಿ ಸೆರೆಹಿಡಿದು ಆಹ್ಲಾದಕರವಾಗಿ ನೀಡಿದ್ದಾರೆ ಭಟ್ಟರ ತಂಡ.
ಹಾಡುಗಳಿಗಿಂತಲೂ, ಚಿತ್ರದ ನಾಯಕನಟ ನುಡಿಯುವ ಸಂಭಾಷಣೆಯು, ಆಧುನಿಕ ಕವಿತೆಗಳಂತೆ ರಂಜಕವಾದ್ಗಿದ್ದವು. ಎಲ್ಲಾ ಮಾತುಗಳಿಗೂ 'ಗಳು' ಪ್ರತ್ಯಯವನ್ನು ಸೇರಿಸಿ ಆಡುವ ಸಂಭಾಷಣೆಯು ತೀವ್ರ ಕಲ್ಪನೆ, ಹಾಗು ವ್ಯಂಗ್ಯದ  ತುತ್ತತುದಿಎನ್ನಿಸುತ್ತದೆ. ಇದು, ಈ ಚಿತ್ರದ ಬಲವೆಂದೂ ಹೇಳಬಹದು.

ನನಗೆ ಇಷ್ಟವಿರುವ ಸಂಭಾಷಣೆಯ ತುಣುಕುಗಳು:
"sslc-ಗಳು, puc-ಗಳು, cet-ಗಳು,
ಇಂಜಿನೀರಿಂಗು,  ಪಂಜಿನೀರಿಂಗು,  ಮೆಡಿಕಲ್-ಗಳು,
ಹಲ್ಲು ,ಕಿವಿ,  ಮೂಗು,  ಬಾಯಿ,  ಡಾಕ್ಟರಗಳು
ಕೈ ಬೀಸಿ  ಕರೆದು,  ಕೆರದಲ್ಲಿ  ಹೊಡೆವ syllabus-ಗಳು
ಪಾಸು  ಮಾಡಲು  ಮನಸೇ  ಬಾರದ  ಕೋರ್ಸುಗಳು;
ಕಷ್ಟದ  ಸೀಟುಗಳು, ಗುತ್ತಿಗೆ donation-ಗಳು ,
ಸತ್ತರು parents-ಗಳು, ಇದ್ದರು  students-ಗಳು ."

"ಕಣ್ಣು ಹಾಯಿಸಿದಲೆಲ್ಲ ತೆಂಗಿನಮರಗಳು, 
ಅಪ್ಪಿ ತಪ್ಪಿ ಕೆಮ್ಮಿದರೆ ಕುಸಿದು ಬೀಳುವ ದೊಡ್ಡ ಮನೆಗಳು, 
ಹಾಗು ಅದರಲ್ಲಿ ಬದುಕುತ್ತಿರುವ ಜನರು;"

"ದೀರ್ಘ ದಂಡ ನಮಸ್ಕಾರಗಳು,
ಅದೇ ಲಂಗ-ಬ್ಲೌಸುಗಳು, ಕುಂಕುಮಗಳು-ಬಳೆಗಳು,
ಭಾರತೀಯ ಹೆಣ್ಣು ಮಕ್ಕಳುಗಳು, 
ಆವಾಗ ಇದ್ದರು, ಈವಾಗ ಇಲ್ಲ "

01 November, 2010

ಕನ್ನಡ, kannada :-)

I would have wanted to write this post entirely in Kannada, to symbolize Kannada Raajyotsava. But, I wanted to mention some interesting facts about Kannada, which I wanted the non-Kannadigas to know as well. More than the non-Kannadigas, there is an urgent necessity for the Kanndigas themselves to refresh some facts such as these, and reclaim the pride in the language and heritage, which seems to be depleting these days.

  1. Kannada language has a script known as the 'Brahmi Script'. It comprises of 35 consonants and 14 vowels. Each written symbol in the Kannada script corresponds with one syllable, as opposed to one phoneme in languages like English.
  2. All Indian languages are phonetic when compared to other world languages. And, Kannada is the most phonetic amongst these. Both spoken Kannada and the script comprise of all the syllables. With its 49 characters Kannada is the most phonetic language in India able to produce vocal sounds of all forms used for communication. 
  3. Kannada is one of the oldest languages in the world still in use. In India, with the exception of Tamil and Telugu, there is no other language older than Kannada in use. The Halmidi inscriptions date back to 450 AD, whereas the oldest existing literary work in Kannada- Kaviraajamarga (The name means literally "Royal Path for Poets" and was used as a guide book for poets and scholars) by King Nrupathunga dates back to 850 AD.
  4. English has absorbed some bit of Kannada. For example, the word 'Market'. Etymology experts attribute this word to have been derived from the Latin word 'mercatus(buying and selling)',but, we cannot ignore that in Kannada "Maarukatte" means precisely what the word market stands for. 
  5. Kannada script is also used by two other languages spoken in Karnataka -Tulu and Konkani. Kannada and Telugu share almost an identical script. 

The rest will be in Kannada :)

ರಾಜ್ಯೋತ್ಸವಕ್ಕೆ ಹೇಳಬೇಕಾದ ಸಂಗತಿಯನ್ನು ಆಂಗ್ಲದಲ್ಲೇ ಹೇಳಿಬಿಟ್ಟೆ. .ಈಗ ನಮ್ಮ ಕನ್ನಡ ಸಾಹಿತ್ಯದ ಇಬ್ಬರು ಮುಖ್ಯ ವಚನಕಾರರ, ನನಗೆ ಹಿಡಿಸಿದೆ ಒಂದೆರಡು ವಚನವನ್ನು ಇಲ್ಲಿ ನೆನಪಿಸುತ್ತಿದೇನೆ.
ಸರ್ವಜ್ಞ :

ನಿತ್ಯ ನೇಮಗಳೇಕೆ | ಮತ್ತೆ ಪೂಜೆಗಳೇಕೆ ?
ನೆತ್ತಿ ಬೋಳೇಕೆ? | ಜಡೆ ಏಕೆ ಮನದಲಿ 
ಸತ್ಯವುಳ್ಳವನಿಗೆ ಸರ್ವಜ್ಞ ||


ಗುರು ಇಲ್ಲದ ಮಠವು| ಹಿರಿಯರಿಲ್ಲದ ಮನೆಯು |
ಅರಸರಿಲ್ಲದೂರು ಇವು ಮೂವರು ನುಲಿಹರಿದ |
ಹೊರೆಸಿನಂತಕ್ಕು ಸರ್ವಜ್ಞ ||



ಬಸವಣ್ಣ :


ನಿಮಿಷದ ನಿಮಿಷಂ ಬೋ, ಕ್ಷಣದೊಳಗರ್ಥಂ ಬೋ !
ಕಣ್ಣು ಮುಚ್ಚಿ ಬಿಚ್ಚುವೈಸುಬೇಗಂ ಬೋ :
ಸಂಸಾರದಾಗುಂ ಬೋ ! ಸಂಸಾರದ ಹೋಗುಂ ಬೋ !
ಸಂಸಾರದೊಪ್ಪಂ ಬೋ !
ಕೂಡಲ ಸಂಗಮದೇವಾ,
ನೀ ಮಾಡಿದ ಮಾಯೆಯೇಂ ಬೋ, ಅಭ್ರಚ್ಚ್ಹಾ ಯೇಂ ಬೋ !

ರಾಜ್ಯೋತ್ಸವದ ಶುಭಾಶಯಗಳು... :)  
The Halmidi scripture

10 October, 2010

ಏನ್ರೀ ರಾಜಕಾರಣ ಇದು ?

ವಿಧಾನ ಸೌಧದ ಸುತ್ತಲೂ ಮಾಟಮಂತ್ರ ಮಾಡಿ, ನಮ್ಮ  ಎಡಿಯೂರಪ್ಪನ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ರಚಿಸಲಾಗಿದೆ ಅಂತೆ ! 
ಇದನ್ನು ಪರಿಹರಿಸಲು, ವಿಧಾನ ಸೌಧವನ್ನೇ ಮೂರು ದಿನಗಳು ಮುಚ್ಚಿಟ್ಟಿದ್ದಾರೆ.  ಅಲ್ಲದೆ, ವಾಡಿಕೆಯಾಗಿ ಬಳಸಲಾಗುವ ದ್ವಾರವನ್ನು  ಈಗ ಮುಚ್ಚಿ  ,ಬೇರೊಂದು ಸುರ್ಯೋಮುಖಿ ದ್ವಾರವನ್ನು  ಮಾತ್ರ ತೆರೆದಿದ್ದಾರಂತೆ.

ಇಂತಹ ಜನರು ನಮ್ಮ ಮುಖಂಡರು, ನಮ್ಮನು ಅವರ ಆಡಳಿತದಲ್ಲಿ ಭದ್ರವಾಗಿ ನೋಡಿಕೊಳ್ಳುತ್ತಾರೆ ಎಂದು ಕಲ್ಪನೆ ಮಾಡುವುದೂ ಸಾಧ್ಯವಿಲ್ಲ. 
ಏನೋ, ವಯಕ್ತಿಕವಾಗಿ ಪೂಜೆ ಪುರಸ್ಕಾರ ಮಾಡಿಕೊಂಡು ಇದ್ದರು, ಈಗೀಗ, ನಮ್ಮ ರಾಜಕಾರಣವೇ ಪೂಜೆ- ಪುರಸ್ಕಾರ. ಮಾಟ-ಮಂತ್ರಗಳ ಜಾಲದಲ್ಲಿ ಸಿಲುಕಿಸಿ , ಒಂದಿಷ್ಟೂ  ವಿವೇಕವಿಲ್ಲದೆ ನಡೆಸಲಾಗುತ್ತಿದೆ. ಇದನ್ನೆಲ್ಲ್ಲ ಪರಿಗಣಿಸಿ ನೋಡಿದರೆ ಭಯದ ಜೊತೆ, ಅಸಹ್ಯ ಅನಿಸುತ್ತದೆ!

ಇಂತಹೆ ಹುಚ್ಚಾಟ ಏನೋ ನಡೆಯುತ್ತದೆ ಅಂತ ನೋಡಿದರೆ, ಜೊತೆಗೆ, ಟಿ.ವಿ ನಲ್ಲಿ ಹೇಳುವಂತೆ ಶಾಸಕರನ್ನು ಕುದುರೆ ವ್ಯಾಪಾರದಂತೆ ಮಾರಾಟ ಮಾಡುತ್ತಿದ್ದಾರೆ.  
ದೇಶಾದ್ಯಂತ ಪ್ರವಾಸ ಹೋಗಿ, ಚೆನ್ನೈ, ಗೋವಾ, ಪುಣೆ, ಅಲ್ಲಿ -ಇಲ್ಲಿ , ತಮ್ಮ ಬೆಲೆಯನ್ನು  ಹರಾಜು ಹಾಕುತಿದ್ದರೆ! 

ಹಣದ ಹಿಂದೆ ಬಿದ್ದಿರುವ ಶಾಸಕರು, ಮೂಢ ನಂಬಿಕೆಗಳಲ್ಲಿ ಮುಳುಗಿರುವ ಮುಖಂಡರು, ಊಸರವಲ್ಲಿಯಂತೆ ಬಣ್ಣ ಹಾಗು ನಿಲುವುಗಳನ್ನು ಬದಲಾಯಿಸುವ ನಾಯಕರು, ಇದನ್ನೆಲ್ಲಾ ಮರೆತು ಇವರೆಲ್ಲರ ಹಿಂದೆ ಹೋಗುವ ಮೂರ್ಖ ಜನರು - ಬಹಳ ಚೆನ್ನಾಗಿದೆರೀ  ನಮ್ಮ ಕರ್ನಾಟಕದ ರಾಜಕೀಯ  ಅವಸ್ಥೆ !

17 August, 2010

ಅಭಿಮಾನವಷ್ಟೇ ಅಲ್ಲ, ಇದು ಅಗತ್ಯ

ಆತ್ಮೀಯ ಓದುಗರೇ,

ಸುಮಾರು ಮೂರು ತಿಂಗಳುಗಳಿಂದ ನನ್ನ ಬ್ಲಾಗಿನ ಓದುಗರ ಚಟುವಟಿಕೆಗಳನ್ನು ಗಮಿನಿಸುತ್ತಿದೆ. ಆಗ ಒಂದು ಆಶ್ಚರ್ಯಕರ  ವಿಷಯವೊಂದು ಗಮನಕ್ಕೆ ಬಂದಿತು: ನನ್ನ ಬ್ಲಾಗಿನ ಲೇಖನಗಳಲ್ಲಿಯೇ ಅತಿ ಹೆಚ್ಚು ಒದಲಾಗುತ್ತಿರುವ ಲೇಖನಗಳು , ನಾನು ಕನ್ನಡದಲ್ಲಿ ಬರೆದಿರುವವು. ಇದು ಬಹಳ ಸಂತೋಷದ ವಿಷಯ , ಹೌದು.

ಆದರೆ ನಾನು ಬರೆದಿರುವ ೩೦೦ಕ್ಕೂ ಹೆಚ್ಚು ಲೇಖನಗಳಲ್ಲಿ, ಕೇವಲ ನಾಲ್ಕಯ್ದು ಮಾತ್ರ ಕನ್ನಡದಲ್ಲಿರುವುದರಿಂದ , ಇನ್ನು ಮುಂದೆ ಹೆಚ್ಚು ಕನ್ನಡ ಲೇಖನಗಳನ್ನು ಬರೆಯುವುದಾಗಿ ನಿಶ್ಚಯಿಸಿದ್ದೇನೆ.

ಹಾಗೆಯೇ, ನನ್ನ ಗೆಳೆಯರಲ್ಲಿ ಒಂದು ಕುತೂಹಲವೂ ಮೂಡುತ್ತಿದೆ. ಅದನ್ನು ಕುರಿತು ಕೆಲವರು ಕೇಳಿಯೂಬಿಟ್ಟರು.
ನನ್ನ ಮಾತೃಭಾಷೆ ತಮಿಳಾಗಿದ್ದರೂ, ನನಲ್ಲಿ ಕನ್ನಡದ ಬಗ್ಗೆ ಇರುವ ಆಸಕ್ತಿಯ ಹೇಗೆ, ಎಂಬುದು?
 ಇದಕ್ಕೆ ಸಹಜವಾದ ಒಂದು ಸರಳ ಉತ್ತರವಿದೆ.
ಸಹಜ ಏಕೆಂದರೆ, ನಾನು ಕನ್ನಡವನ್ನು ವಿದ್ಯಾರ್ಥಿಯಾಗಿ ಶಾಲೆಯಿಂದ ಕಾಲೇಜಿನವರೆಗೂ ಅಧ್ಯಯನ ಮಾಡಿದ್ದೇನೆ. ನನ್ನಂತೆಯೇ ಬಹಳಷ್ಟು ಜನ ಕನ್ನಡವನ್ನು ಓದಿದ್ದರೂ, ಏಕೋ ಅದನ್ನು ಮರೆತವರಂತೆ ವರ್ತಿಸುತ್ತಾರೆ.

ಈ ಟೀಕೆಯ ಮಾತನ್ನು ನಾನು, ಉಪಯೋಗಕ್ಕೂ ಮೀರಿ ಆಂಗ್ಲವನ್ನು ಬಳಸುವ ಎಲ್ಲರ ಬಗ್ಗೆ ಹೇಳುತ್ತಿದ್ದೇನೆ.

ಆಂಗ್ಲ ಭಾಷೆಯು ನಮಗೆ ಹೊರ ಜಗತ್ತನ್ನು ನೋಡಲು ಸಹಾಯಮಾಡುವ ಒಂದು ಕನ್ನಡಕವೇ ಹೊರತು, ನಮ್ಮ ಕಣ್ಣುಗಳಲ್ಲ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಕಲಾಚಾರ ಹಾಗು ಜನರನ್ನು ಅರಿತುಕೊಳ್ಳಲು ಬಳಸಲಾಗುವ ಅತ್ಯಮೂಲ್ಯ ಸಲಕರಣೆಯಾದ  ಸ್ಥಳೀಯ ಭಾಷೆಯೇ ನಮ್ಮ ಕಣ್ಣುಗಳು. ಈ ಕಣ್ಣುಗಳನ್ನು ಇಲ್ಲದಾಗಿಸಿ, ನಾವು ಯಾವುದೇ ಕನ್ನಡಕವನ್ನು ಹಾಕಿಕೊಂಡರೂ ನಮ್ಮ ದೃಷ್ಟಿಗೆ ಕಾಣುವುದು ಮಂದವಾದ ಬಿಸಿಲು ಕುದುರೆಯೇ ಹೊರತು ನಿಜಸ್ಥಿತಿಯಲ್ಲ.

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಲ್ಲಿ, ನಮ್ಮ ರಾಷ್ಟ್ರದ ಎಲ್ಲಾ ಭಾಷೆಗಳೂ ಕಷ್ಟವಾದ ಒಂದು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿವೆ ಎಂದು ಪರಿಗಣಿಸಬಹುದು. ವಯಕ್ತಿಕವಾಗಿ ಹೊರಭಾಷೆಗಳನ್ನು ಕಲಿಯುವುದು ತಪ್ಪೇ ಅಲ್ಲ;  ಆದರೆ, ಸಾಮೂಹಿಕವಾಗಿ ನಮ್ಮ ಭಾಷೆಗಳನ್ನು ನಿರ್ಲಕ್ಷಿಸುವುದು, ಸಾವಿರಾರು ವರ್ಷಗಳಿಂದ ಬೆಳೆದು ಬಂದ ನಮ್ಮ ಕಲಾಚಾರಕ್ಕೆ ನಾವು ಮಾಡುವ ದ್ರೋಹವೆಂದೇ ಹೇಳಬಹುದು.

ನಾವೆಲ್ಲರೂ ನಮ್ಮ ಸ್ಥಳೀಯ ಭಾಷೆಗಳನ್ನು ಈ ಗಣಕ ಯುಗದಲ್ಲಿ ಹೆಚ್ಚಾಗಿ ಬಳಸಿ, ಅವುಗಳನ್ನು ಕಾಪಾಡಬೇಕು. ಇಲ್ಲವೆಂದರೆ, ನಾನು ನನ್ನ ಹಿಂದಿನಿ ಲೇಖನಗಳಲ್ಲಿ ಹೇಳಿರುವಂತೆ ನಮ್ಮ ಭಾಷೆಗಳೆಲ್ಲವೂ ಸಂಸ್ಕೃತದಂತೆ ಸ್ಮಾರಕ ಸ್ಥಿತಿ ಪಡೆಯವುದು ಖಚಿತ.

LinkWithin

Related Posts with Thumbnails