18 April, 2010

ಮಾತೃ ಭಾಷೆ ಹಾಗು ಅದರಲ್ಲಿ ಕಲಿಕೆ : 'ತಂತ್ರಾಂಶಗಳ ಸ್ಥಳೀಕರಣ'

ಇಂದಿನ ದಿನ, ಸ್ವತಂತ್ರ ತಂತ್ರಾಂಶ ಆಂದೋಲನ-  ಕರ್ನಾಟಕದ ಮುಖಾಂತರ ಒಂದು ಮುಖ್ಯವಾದ ಕಾರ್ಯಕ್ರಮ - 'ತಂತ್ರಾಂಶಗಳ ಸ್ಥಳೀಕರಣ'ವನ್ನು ಮೈಸೂರಿನ  ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜಿನ ಉತ್ಸಾಹಿ ವಿದ್ಯಾರ್ಥಿಗಳೊಡನೆ ಆಯೋಜಿಸಿದ್ದೆವು .


'ತಂತ್ರಾಂಶಗಳ ಸ್ಥಳೀಕರಣ'  ಅಂದರೆ ಸ್ಥಳೀಯ ಭಾಷೆಗಳಿಗೆ ತಂತ್ರಾಂಶಗಳನ್ನು ಭಾಷಾಂತರಿಸಿ, ಅಲ್ಲಿಯ ಜನತೆಗೆ ಗಣಕಗಳು ಉಪಯುಕ್ತವಾಗುವಂತೆ ಮಾಡುವ ಒಂದು ಯತ್ನ.  ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಒಳ್ಳೆಯ ಪರಿಣಾಮಗಳನ್ನು ತಂದದಿದೆ ಎಂದು ಭಾವಿಸುತ್ತೇನೆ.

ಇಂದಿನ ಸಭೆಯ ಎಲ್ಲಾ ಮಾತುಗಾರರು 'ಮಾತೃಭಾಷೆ  ಹಾಗು ಅದರಲ್ಲಿ ನಡೆಯುವ ಕಲಿಕೆ'ಯ ಮಹತ್ವದ ಅಂಶಗಳನ್ನು ಬಹಳ ಆಳವಾಗಿ ವಿಶ್ಲೇಷಿಸಿ , ನಾವೂ ಅದರ  ಬಗ್ಗೆ ಚಿಂತಿಸುವಂತೆ ಮಾಡಿದರು.   ಈ ದಿಕ್ಕಿನಲ್ಲಿ ನಮಗಿರುವ ಜವಾಬ್ದಾರಿಗಳನ್ನೂ  ಮನವರಿಕೆಗೊಳಿಸಿದರು .


ನಮ್ಮ ಮೆದುಳು ಯಾವ ಭಾಷೆಯಲ್ಲಿ ತನ್ನ ಕಲ್ಪನೆ ಹಾಗು ಯೋಚನೆಗಳನ್ನು ಮಾಡುತ್ತದೆಯೋ , ಆ ಭಾಷೆಯು ನಮ್ಮ  ಮಾತೃಭಾಷೆಯಾಗಿಬಿಡುತ್ತದೆ   .

ಹೀಗಿದ್ದಲ್ಲಿ , ನಮ್ಮ ದೇಶದ  ಶಿಕ್ಷಣ ವ್ಯವಸ್ಥೆಯು, ಆಯಾ ರಾಜ್ಯಗಳ ಭಾಷೆಗಳಲ್ಲಿಲ್ಲದೆ  ಆಂಗ್ಲದಲ್ಲಿರುವುದರಿಂದ, ನಮ್ಮ ಮಾತೃಭಾಷೆಯ ಮೇಲಿರಬೇಕಾದ  ಅಭಿಮಾನ ಹಾಗು ಆಸಕ್ತಿ ಕುಂದಿಹೋಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.
ಈನಡುವೆ, ಎಲೆಲ್ಲೂ ಗಣಕೀಕರಣ ವೇಗವಾಗಿ ವ್ಯಾಪಿಸುತ್ತಿರುವಾಗ ನಮ್ಮ ಮಾತೃಭಾಷೆಗಳು ಗಣಕಗಳೊಂದಿಗೆ ಹೊಂದಿಕೊಂಡು , ಅಳವಡಿಸದೆ ಹೋದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ನಮ್ಮೆಲ್ಲ ಭಾಷೆಗಳಿಗೂ ಸಂಸ್ಕೃತ ಭಾಷೆಗೆ ಬಂದಿರುವ ಸ್ಥಿತಿ ತಪ್ಪಿದಲ್ಲ.

ಆದುದರಿಂದ, ನಾವೆಲ್ಲರೂ 'ತಂತ್ರಾಂಶಗಳ ಸ್ಥಳೀಕರಣ' ವನ್ನು ಮೊದಲನೆಯ  ಹೆಜ್ಜೆಯಾಗಿ ಆರಂಭಿಸಿ, ಮುಂದಿನ ಹೆಜ್ಜೆಯಾಗಿ ನಮ್ಮ ಸ್ಥಳೀಯ ಪೂರೈಕೆಗಳಿಗಾಗಿ ಬೇಕಾದಂತಹ ತಂತ್ರಾಂಶಗಳನ್ನು ಬರೆದು ಬಳಸಬಹುದು.

ಈ ಮೊದಲನೆಯ ಹೆಜ್ಜೆಯ ಮೊದಲ ಯತ್ನವಾಗಿ  ನಡೆದ ಇಂದಿನ ನಮ್ಮ ಚಟುವಟಿಕೆಯಲ್ಲಿ, ಸುಮಾರು ೩೦ ವಿದ್ಯಾರ್ಥಿಗಳು, ಹಲವಾರು ಪ್ರಾಧ್ಯಾಪಕರು, ಮತ್ತು ನಮ್ಮ ಉತ್ಸಾಹಿಗಳು ಎಲ್ಲರೂ ಕೂಡಿ  ಆಂಗ್ಲದಲ್ಲಿದ ಡೆಬಿಯನ್ ಓ ಎಸ್ ಅಥವ ಕಾರ್ಯ ವ್ಯವಸ್ಥೆಯ ಕೆಲವು ಮುಖ್ಯ ಭಾಗಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಈ ಚಟುವಟಿಕೆಯು ಸ್ವಲ್ಪ ಸಮಯದ ನಂತರ ಬಹಳ ಮನೋರಂಜಕವಾಗಿ ಕಾಣಲಾರಂಭಿಸಿತು. ಏಕೆಂದರೆ, .ಆಂಗ್ಲದಲ್ಲಿರುವ  ಹಲವಾರು  ತಾಂತ್ರಿಕ ಪದಗಳನ್ನು ಹುಡುಕುತ್ತ , ಅವುಗಳನ್ನು ಸೃಷ್ಟಿಸುತ್ತ  ನಡೆದ ಈ ಪ್ರಕ್ರಿಯೆ ಒಂದು ಸಣ್ಣದಾದ  ಪದಗಳ ಹಬ್ಬವಾಗಿಹೋಯಿತು .


ಇಂತಹ ಚಟುವಟಿಕೆಗಳು ಆಗೊಮ್ಮೆ- ಈಗೊಮ್ಮೆ  ಅಲ್ಲದೆ ನಿರಂತರವಾಗಿ ನಡೆದರೆ ಮಾತ್ರ ನಮ್ಮ ಗುರಿಯಾದ- ಕನ್ನಡದಲ್ಲಿ ಪೂರ್ಣ ಗಣಕ   ವಿಜ್ಞ್ಯಾನ ಹಾಗು ಇದರಿಂದ ಜನಸಾಮಾನ್ಯರಿಗೆ ಅನುಕೂಲ- ಈ ನಿಟ್ಟಿನಲ್ಲಿ ಹೊಗಲು ಸಾಧ್ಯ.

ನಿಮ್ಮಲ್ಲಿರುವ ಕನ್ನಡದ ಅಭಿಮಾನಿ ಬರಿಯ ಮಾತುಗಳಲ್ಲಿ ಸೀಮಿತವಾಗಿರದೆ, ಇಂತಹ ಕಾರ್ಯಕ್ರಮಗಳನ್ನು ನೀವು ಸಂಬಂಧಪಟ್ಟ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುವಿರಿ ಎಂದು ಆಶಿಸುತ್ತೇನೆ .



ಹಿನ್ನುಡಿ :  ಸಭೆಗಳಲ್ಲಿ ತೀಕ್ಷ್ಣವಾದ ಸರಳ ಕನ್ನಡದಲ್ಲಿ ಮಾತನಾಡಲು  ನನಗೆ ಸ್ವಲ್ಪ ಕಷ್ಟಕರವಾಗಿರುವುದರಿಂದ  ನಾನು ವೇದಿಕೆಗಳಲ್ಲಿ ಕನ್ನಡದಲ್ಲಿ ಮಾತನಾಡಲು  ಹಿಂಜರಿಯುತ್ತೇನೆ. ಇದಕ್ಕಾಗಿ ನನ್ನನ್ನು  ಕ್ಷಮಿಸಿ

No comments:

Post a Comment

LinkWithin

Related Posts with Thumbnails