ಆತ್ಮೀಯ ಓದುಗರೇ,
ಸುಮಾರು ಮೂರು ತಿಂಗಳುಗಳಿಂದ ನನ್ನ ಬ್ಲಾಗಿನ ಓದುಗರ ಚಟುವಟಿಕೆಗಳನ್ನು ಗಮಿನಿಸುತ್ತಿದೆ. ಆಗ ಒಂದು ಆಶ್ಚರ್ಯಕರ ವಿಷಯವೊಂದು ಗಮನಕ್ಕೆ ಬಂದಿತು: ನನ್ನ ಬ್ಲಾಗಿನ ಲೇಖನಗಳಲ್ಲಿಯೇ ಅತಿ ಹೆಚ್ಚು ಒದಲಾಗುತ್ತಿರುವ ಲೇಖನಗಳು , ನಾನು ಕನ್ನಡದಲ್ಲಿ ಬರೆದಿರುವವು. ಇದು ಬಹಳ ಸಂತೋಷದ ವಿಷಯ , ಹೌದು.
ಆದರೆ ನಾನು ಬರೆದಿರುವ ೩೦೦ಕ್ಕೂ ಹೆಚ್ಚು ಲೇಖನಗಳಲ್ಲಿ, ಕೇವಲ ನಾಲ್ಕಯ್ದು ಮಾತ್ರ ಕನ್ನಡದಲ್ಲಿರುವುದರಿಂದ , ಇನ್ನು ಮುಂದೆ ಹೆಚ್ಚು ಕನ್ನಡ ಲೇಖನಗಳನ್ನು ಬರೆಯುವುದಾಗಿ ನಿಶ್ಚಯಿಸಿದ್ದೇನೆ.
ಹಾಗೆಯೇ, ನನ್ನ ಗೆಳೆಯರಲ್ಲಿ ಒಂದು ಕುತೂಹಲವೂ ಮೂಡುತ್ತಿದೆ. ಅದನ್ನು ಕುರಿತು ಕೆಲವರು ಕೇಳಿಯೂಬಿಟ್ಟರು.
ನನ್ನ ಮಾತೃಭಾಷೆ ತಮಿಳಾಗಿದ್ದರೂ, ನನಲ್ಲಿ ಕನ್ನಡದ ಬಗ್ಗೆ ಇರುವ ಆಸಕ್ತಿಯ ಹೇಗೆ, ಎಂಬುದು?
ಇದಕ್ಕೆ ಸಹಜವಾದ ಒಂದು ಸರಳ ಉತ್ತರವಿದೆ.
ಸಹಜ ಏಕೆಂದರೆ, ನಾನು ಕನ್ನಡವನ್ನು ವಿದ್ಯಾರ್ಥಿಯಾಗಿ ಶಾಲೆಯಿಂದ ಕಾಲೇಜಿನವರೆಗೂ ಅಧ್ಯಯನ ಮಾಡಿದ್ದೇನೆ. ನನ್ನಂತೆಯೇ ಬಹಳಷ್ಟು ಜನ ಕನ್ನಡವನ್ನು ಓದಿದ್ದರೂ, ಏಕೋ ಅದನ್ನು ಮರೆತವರಂತೆ ವರ್ತಿಸುತ್ತಾರೆ.
ಈ ಟೀಕೆಯ ಮಾತನ್ನು ನಾನು, ಉಪಯೋಗಕ್ಕೂ ಮೀರಿ ಆಂಗ್ಲವನ್ನು ಬಳಸುವ ಎಲ್ಲರ ಬಗ್ಗೆ ಹೇಳುತ್ತಿದ್ದೇನೆ.
ಆಂಗ್ಲ ಭಾಷೆಯು ನಮಗೆ ಹೊರ ಜಗತ್ತನ್ನು ನೋಡಲು ಸಹಾಯಮಾಡುವ ಒಂದು ಕನ್ನಡಕವೇ ಹೊರತು, ನಮ್ಮ ಕಣ್ಣುಗಳಲ್ಲ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಕಲಾಚಾರ ಹಾಗು ಜನರನ್ನು ಅರಿತುಕೊಳ್ಳಲು ಬಳಸಲಾಗುವ ಅತ್ಯಮೂಲ್ಯ ಸಲಕರಣೆಯಾದ ಸ್ಥಳೀಯ ಭಾಷೆಯೇ ನಮ್ಮ ಕಣ್ಣುಗಳು. ಈ ಕಣ್ಣುಗಳನ್ನು ಇಲ್ಲದಾಗಿಸಿ, ನಾವು ಯಾವುದೇ ಕನ್ನಡಕವನ್ನು ಹಾಕಿಕೊಂಡರೂ ನಮ್ಮ ದೃಷ್ಟಿಗೆ ಕಾಣುವುದು ಮಂದವಾದ ಬಿಸಿಲು ಕುದುರೆಯೇ ಹೊರತು ನಿಜಸ್ಥಿತಿಯಲ್ಲ.
ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಲ್ಲಿ, ನಮ್ಮ ರಾಷ್ಟ್ರದ ಎಲ್ಲಾ ಭಾಷೆಗಳೂ ಕಷ್ಟವಾದ ಒಂದು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿವೆ ಎಂದು ಪರಿಗಣಿಸಬಹುದು. ವಯಕ್ತಿಕವಾಗಿ ಹೊರಭಾಷೆಗಳನ್ನು ಕಲಿಯುವುದು ತಪ್ಪೇ ಅಲ್ಲ; ಆದರೆ, ಸಾಮೂಹಿಕವಾಗಿ ನಮ್ಮ ಭಾಷೆಗಳನ್ನು ನಿರ್ಲಕ್ಷಿಸುವುದು, ಸಾವಿರಾರು ವರ್ಷಗಳಿಂದ ಬೆಳೆದು ಬಂದ ನಮ್ಮ ಕಲಾಚಾರಕ್ಕೆ ನಾವು ಮಾಡುವ ದ್ರೋಹವೆಂದೇ ಹೇಳಬಹುದು.
ನಾವೆಲ್ಲರೂ ನಮ್ಮ ಸ್ಥಳೀಯ ಭಾಷೆಗಳನ್ನು ಈ ಗಣಕ ಯುಗದಲ್ಲಿ ಹೆಚ್ಚಾಗಿ ಬಳಸಿ, ಅವುಗಳನ್ನು ಕಾಪಾಡಬೇಕು. ಇಲ್ಲವೆಂದರೆ, ನಾನು ನನ್ನ ಹಿಂದಿನಿ ಲೇಖನಗಳಲ್ಲಿ ಹೇಳಿರುವಂತೆ ನಮ್ಮ ಭಾಷೆಗಳೆಲ್ಲವೂ ಸಂಸ್ಕೃತದಂತೆ ಸ್ಮಾರಕ ಸ್ಥಿತಿ ಪಡೆಯವುದು ಖಚಿತ.
No comments:
Post a Comment